ಕ್ಯಾಮರೂನಿನ ಇತಿಹಾಸ
ಕ್ಯಾಮರೂನ್ ಪ್ರದೇಶವನ್ನು 15ನೆಯ ಶತಮಾನದ ಅಂತ್ಯದಲ್ಲಿ ಪೋರ್ಚುಗೀಸ್ ನಾವಿಕ ಫರ್ನಾವೊ ಡೋಪೋ ಕಂಡುಹಿಡಿಯುವವರೆಗೂ ಅದರ ಇತಿಹಾಸವೇನೂ ತಿಳಿದುಬಂದಿರಲಿಲ್ಲ. 17ನೆಯ ಶತಮಾನದಲ್ಲಿ ಐರೋಪ್ಯರು ಇಲ್ಲಿ ವ್ಯಾಪಾರ ಕೋಠಿಗಳನ್ನು ನಿರ್ಮಿಸಿದರು. ಇಲ್ಲಿಯ ಆದಿವಾಸಿಗಳು ಪರಕೀಯರನ್ನು ದೇಶದ ಒಳಭಾಗಗಳಿಗೆ ಹೋಗದಂತೆ ಅಡ್ಡಿಪಡಿಸುತ್ತಿದ್ದುದ್ದರಿಂದ ಬಿಳಿಯರು ದೇಶೀಯ ಮಧ್ಯಸ್ಥಗಾರರಿಗೆ ತಮ್ಮ ಸರಕುಗಳನ್ನು ಕೊಡುತ್ತಿದ್ದರು. ಅವರು ಒಳಭಾಗಗಳಲ್ಲಿ ವ್ಯಾಪಾರ ಮಾಡಿ, ಅಲ್ಲಿಯ ದಂತ, ರಬ್ಬರು ಮತ್ತು ಗುಲಾಮರನ್ನು ತಂದು ಇವರಿಗೆ ಕೊಡುತ್ತಿದ್ದರು. ಡೂಆಲ ಜನಾಂಗದ ಅಕ್ವ ಮತ್ತು ಬೆಲ್ ಪಂಗಡಗಳ ರಾಜರು ಈ ವಿಧದ ಮಧ್ಯವರ್ತಿ ವ್ಯಾಪಾರದಿಂದ ಸಿರಿವಂತರಾದರು. 1800ರ ವೇಳೆಗೆ ತೀರಪ್ರದೇಶಗಳಲ್ಲಿ ಬ್ರಿಟಿಷರ ಪ್ರಭಾವ ಹರಡಿದುದಲ್ಲದೆ 1837ರಲ್ಲಿ ಬಿಂಬಿಯಾದ ರಾಜ ತನ್ನ ಪ್ರದೇಶಗಳಲ್ಲಿ ಕೆಲವನ್ನು ಬ್ರಿಟನಿಗೆ ಬಿಟ್ಟುಕೊಂಡುವಂತಾಯಿತು. ಆಫ್ರಿಕ ಮತ್ತು ಅಮೆರಿಕಗಳ ನಡುವೆ ಗುಲಾಮರ ವ್ಯಾಪಾರ ಭರದಿಂದ ಸಾಗುತ್ತಿದ್ದಾಗ 1845ರಲ್ಲಿ ಬ್ಯಾಪ್ಟಿಸ್ಟ್ ಮಿಷನ್ ಸೊಸೈಟಿಯ ಆಲ್ಫ್ರೆಡ್ ಸೇಕರ್ (1814-80) ಕ್ಯಾಮರೂನಿನಲ್ಲಿ ತನ್ನ ಸಂಸ್ಥೆಯನ್ನು ಸ್ಥಾಪಿಸಲು ಆಕ್ವ ರಾಜನಿಂದ ಒಪ್ಪಿಗೆ ಪಡೆದ. 1848ರಲ್ಲಿ ಈತ ಬಿಂಬಿಯದಲ್ಲೂ ತನ್ನ ಸಂಸ್ಥೆಯನ್ನು ಸ್ಥಾಪಿಸಿದ. 1858ರಲ್ಲಿ ಬ್ಯಾಪ್ಟಿಸ್ಟರನ್ನು ಫರ್ನಾಂಡೊ ಪೋದಿಂದ ಓಡಿಸಲಾಯಿತು. ಆಗ ಸೇಕರ್ ಅಂಬಾಸ್ ಕೊಲ್ಲಿಯಲ್ಲಿ ವಿಕ್ಟೋರಿಯ ಎಂಬ ಹೆಸರಿನಿಂದ ತನ್ನ ಸಂಸ್ಥೆಯ ಶಾಖೆಯನ್ನು ನೆಲೆಗೊಳಿಸಿದ. 1868ರಲ್ಲಿ ಜರ್ಮನಿಯ ವ್ಯೋರ್‍ಮನ್ ಮೊದಲ ಜರ್ಮನ್ ಕೋಠಿಯನ್ನು ಆ ಪ್ರದೇಶದಲ್ಲಿ ಸ್ಥಾಪಿಸಿದ. 1876ರಲ್ಲಿ ತನ್ನ ದೇಶಕ್ಕೆ ಹಿಂದಿರುಗುವ ಮುನ್ನ ಸೇಕರ್ ಡೂಆಲ ಭಾಷೆಗೆ ಬರೆವಣಿಗೆಯನ್ನು ಅಳವಡಿಸಿದನಲ್ಲದೆ, ಅಲ್ಲಿಯ ಗುಲಾಮ ವ್ಯಾಪಾರ ಪದ್ಧತಿಯನ್ನು ನಿರ್ಮೂಲಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾದ.

1832ರ ಸುಮಾರಿನಲ್ಲಿ ಡೂಆಲದ ನಾಯಕರು ತಮ್ಮ ಪ್ರದೇಶವನ್ನು ಬ್ರಿಟನಿಗೆ ವಶಪಡಿಸಿಕೊಳ್ಳಬೇಕೆಂದು ಮಾಡಿದ ಬೇಡಿಕೆಗೆ ಸರಿಯಾದ ಪ್ರತಿಕ್ರಿಯೆ ಬ್ರಿಟನಿನಿಂದ ದೊರಕಲಿಲ್ಲ. ಅದರಿಂದ ಉತ್ತೇಜಿತರಾದ ಜರ್ಮನರು 1884ರಲ್ಲಿ ಕ್ಯಾಮರೂನ್ ಪ್ರದೇಶವನ್ನು ವಶಪಡಿಸಿಕೊಂಡರು. ಒಡನೆ ಬ್ರಿಟಿಷರೂ ಫ್ರೆಂಚರೂ ಧಾವಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಬ್ರಿಟಿಷರು ಕ್ಯಾಮರೂನ್ ಮೇಲೆ ಜರ್ಮನರ ಅಧಿಕಾರವನ್ನು ಒಪ್ಪಿಕೊಂಡರು. ವಿಕ್ಟೋರಿಯದ ಬ್ಯಾಪ್ಟಿಸ್ಟ್ ಮಿಷನ್ ಸಹ ಜರ್ಮನರ ವಶವಾಗಿ ಅಲ್ಲಿ ಬಾಸೆóಲ್ ಮಿಷನ್ನಿನವರು ನೆಲಸಿದರು. ಜರ್ಮನರ ಅಧಿಕಾರ ನಿಧಾನವಾಗಿ ಒಳಪ್ರದೇಶಗಳಿಗೂ ಹರಡಿ, ಜರ್ಮನರ ನೇರ ಆಡಳಿತ ಕ್ರಮೇಣ ಸ್ಥಾಪಿತವಾಯಿತು.

ವಸಾಹತಿನ ಪ್ರಾಕೃತಿಕ ಸಿರಿಯನ್ನು ರೂಢಿಸಿಕೊಳ್ಳುವುದು ಜರ್ಮನರಿಗೆ ಸುಲಭ ಸಾಧ್ಯವಾಗಿರಲಿಲ್ಲ. ವ್ಯಾಪಾರ ಮೊದಲ ಆಕರ್ಷಣೆಯಾಗಿತ್ತು. ಕಾಡುಗಳಲ್ಲಿ ದೊರೆಯುತ್ತಿದ್ದ ರಬ್ಬರು ಮತ್ತು ತಾಳೆ ಎಣ್ಣೆಗಳೂ ದಂತವೂ ಕ್ರಮೇಣ ಕಡಿಮೆಯಾದುವು. ಆದ್ದರಿಂದ ದೊಡ್ಡ ತೋಟಗಳನ್ನು ಬೆಳೆಸಿ, ರಬ್ಬರ್, ಕೋಕೋ ತಾಳೆ ಮುಂತಾದವನ್ನು ಬೆಳೆಯಲಾರಂಭಿಸಿದರು. 1909-1913ರಲ್ಲಿ 195 ಮೈಲಿಗಳ ರೈಲುಮಾರ್ಗವನ್ನು ನಿರ್ಮಿಸಿ ಸಾರಿಗೆ ಪದ್ಧತಿಯನ್ನು ಸುಲಭಗೊಳಿಸಿದರೂ ನದಿಗಳ ಮೂಲಕ ಸಾರಿಗೆ ಸಾಧ್ಯವಿಲ್ಲದಿದ್ದುದರಿಂದ ಜನರ ತಲೆಗಳ ಮೇಲೆ ಸರಕುಗಳನ್ನು ಹೊರಿಸಿ ಸಾಗಿಸಬೇಕಾಗಿತ್ತು. 1912ರ ವೇಳೆಗೆ 54,000 ಎಕರೆಗಳಷ್ಟು ತೋಟಗಳಿದ್ದರೂ ಅವು ವ್ಯಾಪಾರದ ಐದನೆಯ ಒಂದರಷ್ಟು ಸರಕುಗಳನ್ನು ಮಾತ್ರ ಒದಗಿಸುತ್ತಿದ್ದುವು. 1911ರಲ್ಲಿ ಜರ್ಮನಿ ಮೊರಾಕೋ ಮೇಲೆ ಫ್ರೆಂಚರ ರಕ್ಷಣೆಯ ಹಕ್ಕನ್ನು ಒಪ್ಪಿಕೊಂಡದ್ದರ ಫಲವಾಗಿ ಭೂಮಧ್ಯರೇಖೆಯ ಬಳಿ ಫ್ರೆಂಚ್ ವಶದಲ್ಲಿದ್ದ 1,07,000 ಚ.ಮೈ. ಪ್ರದೇಶವನ್ನು ಪಡೆದುಕೊಂಡಿತು. ಆದರೆ 1919ರ ವರ್ಸೇಲ್ಸ್ ಶಾಂತಿ ಒಪ್ಪಂದದ ರೀತ್ಯ ಆ ಭಾಗವನ್ನು ಫ್ರಾನ್ಸಿಗೆ ಹಿಂದಿರುಗಿಕೊಡಬೇಕಾಯಿತು.

ಒಂದನೆಯ ಮಹಾಯುದ್ಧದ ಕಾಲದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಸೈನ್ಯಗಳು ಕ್ಯಾಮರೂನನ್ನು ಗೆದ್ದುವು. ಅದರ ಹೆಚ್ಚಿನ ಭಾಗವನ್ನು ಫ್ರಾನ್ಸೂ ನೈಜೀರಿಯದ ಪಕ್ಕದ ಅಲ್ಪಪ್ರದೇಶವನ್ನು ಬ್ರಿಟನ್ನೂ ವಶಪಡಿಸಿಕೊಂಡುವು. ಆ ಪ್ರದೇಶಗಳ ಆಡಳಿತ ನಡೆಸುವ ಹಕ್ಕನ್ನು ಲೀಗ್ ಆಫ್ ನೇಷನ್ಸ್ ಫ್ರಾನ್ಸ್ ಮತ್ತು ಬ್ರಿಟನ್‍ಗಳಿಗೆ ವಿಧ್ಯುಕ್ತವಾಗಿ ಒಪ್ಪಿಸಿತು. ದ್ವಿತೀಯ ಮಹಾಯುದ್ಧದ ಅನಂತರ ಈ ವ್ಯವಸ್ಥೆಯನ್ನು ಮುಂದುವರಿಸುವಂತೆ ವಿಶ್ವಸಂಸ್ಥೆ ಆದೇಶ ನೀಡಿತು.

	ಬ್ರಿಟಿಷರ ಆಡಳಿತಕ್ಕೊಳಪಟ್ಟ ದಕ್ಷಿಣ ಮತ್ತು ಉತ್ತರ ಕ್ಯಾಮರೂನ್ ಎಂಬ ಎರಡು ವಿಭಾಗಗಳಲ್ಲಿ ದಕ್ಷಿಣ ವಿಭಾಗ ಒಬ್ಬ ಕಮಿಷನರ್ ಅಧಿಕಾರಕ್ಕೊಳಪಟ್ಟಿತ್ತು. ಆತ ನೈಜೀರಿಯದ ಬ್ರಿಟಿಷ್ ಗವರ್ನರ್-ಜನರಲ್‍ನ ಅಧಿಕಾರಕ್ಕೊಳಪಟ್ಟಿದ್ದ. ಸ್ಥಳೀಯ ಆಡಳಿತವನ್ನು ದೇಶೀಯ ನಾಯಕರು ಮತ್ತು ಅಧಿಕಾರಿಗಳಿಗೆ ವಹಿಸಲಾಗಿತ್ತು. 1954ರಿಂದ ದಕ್ಷಿಣ ಕ್ಯಾಮರೂನ್ ಸ್ವಯಮಾಡಳಿತ ಪ್ರಾಂತ್ಯವಾಯಿತು. ಉತ್ತರ ಕ್ಯಾಮರೂನ್ ಉತ್ತರ ನೈಜೀರಿಯ ಪ್ರದೇಶದ ಆಡಳಿತಕ್ಕೊಳಪಟ್ಟಿತ್ತು. ನೈಜರೀಯಕ್ಕೆ ಸ್ವಾತಂತ್ರ್ಯ ದೊರಕುವ ಮುನ್ನ 1959ರಲ್ಲಿ ನಡೆದ ಜನಮತಗಣನೆಯಲ್ಲಿ ಉತ್ತರ ಕ್ಯಾಮರೂನ್ ನೈಜೀರಿಯದೊಂದಿಗೆ ಸೇರುವ ಇಚ್ಛೆಯನ್ನು ಪ್ರಕಟಿಸಿತು. ಮತ್ತೆ 1961ರ ಜನಮತಗಣನೆಯಲ್ಲೂ ಉತ್ತರ ಕ್ಯಾಮರೂನ್ ಅದೇ ಇಚ್ಛೆಯನ್ನು ಪ್ರಕಟಿಸಿ ನೈಜೀರಿಯದೊಂದಿಗೆ ಸೇರಿತು. ದಕ್ಷಿಣ ಕ್ಯಾಮರೂನ್ ಈ ಎರಡು ಜನಮತಗಣನೆಗಳಲ್ಲೂ ಕ್ಯಾಮರೂನ್ ಗಣರಾಜ್ಯದೊಂದಿಗೆ ಐಕ್ಯವಾಗುವ ಇಚ್ಛೆಯನ್ನು ಪ್ರಕಟಿಸಿ 1961ರ ಅಕ್ಟೋಬರ್ 1ರಂದು ಅದರೊಂದಿಗೆ ಲೀನವಾಯಿತು.

ಫ್ರೆಂಚರು ತಮ್ಮ ಆಡಳಿತಕ್ಕೊಳಪಟ್ಟಿದ್ದ ಪ್ರದೇಶಗಳಿಗೆ ರಾಜಕೀಯ ಮತ್ತು ಆರ್ಥಿಕ ಸ್ವಯಮಾಡಳಿತವನ್ನು ನೀಡಿದ್ದರು. ದ್ವಿತೀಯ ಯುದ್ಧಕಾಲದಲ್ಲಿ ಸ್ವತಂತ್ರ ಫ್ರೆಂಚ್ ಚಳವಳಿಗೆ ಸೇರಿದ ಈ ಪ್ರಾಂತ್ಯ ಜನರಲ್ ಚಾಲ್ರ್ಸ್ ಡ ಗಾಲನ ಕೇಂದ್ರ ಕಾರ್ಯಸ್ಥಾನವಾಗಿತ್ತು. 1960ರ ಜನವರಿ 1ರಂದು ಕ್ಯಾಮರೂನ್ ಗಣರಾಜ್ಯವಾಯಿತು.				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ